ಬೇಡ್ಸ	
ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಮವಲಿ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ. ಪುಣೆ-ಮುಂಬಯಿ ರೈಲುಮಾರ್ಗದಲ್ಲಿ ಮಲವ್ಲಿ ರೈಲ್ವೆ ನಿಲ್ದಾಣದಿಂದ ಆಗ್ನೇಯಕ್ಕೆ ಸುಮಾರು 10 ಕಿಮೀ ದೂರದಲ್ಲಿದೆ. ಇದನ್ನು ಪ್ರಾಚೀನದಲ್ಲಿ ಮಾರಕುಡ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತೆಂದು ಶಾಸನವೊಂದರಿಂದ ತಿಳಿದು ಬರುತ್ತದೆ. ಇದು ಬೌದ್ಧ ಸಂನ್ಯಾಸಿಗಳ ವಾಸಸ್ಥಾನವಾಗಿತ್ತು. 

	ಇಲ್ಲಿರುವ ಸಹ್ಯಾದ್ರಿ ಬೆಟ್ಟಗಳ ಪೂರ್ವ ಭಾಗದಲ್ಲಿ ಬೌದ್ಧರ ಕೆಲವು ಗುಹಾಂತರ ದೇವಾಲಯಗಳಿವೆ. ಒಟ್ಟು ಹದಿಮೂರು ಗುಹೆಗಳಿದ್ದು ಇವನ್ನು ಲೇಣಗಳೆಂದೂ ಕರೆಯಲಾಗುತ್ತದೆ. ವಾಸ್ತುಶಿಲ್ಪ ದೃಷ್ಟಿಯಿಂದ 7ನೆಯ ಗುಹೆ (ಸ್ತೂಪವನ್ನೊಳಗೊಂಡ ದೇವಾಲಯ) ಮತ್ತು 11ನೆಯ ಗುಹೆಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿವೆ. ಈ ಎಲ್ಲ ಗುಹೆಗಳ ನಿರ್ಮಾಣದ ಕಾಲಾನುಕ್ರಮಣಿಕೆಯನ್ನು ಗುರುತಿಸುವುದು ಸಂದಿಗ್ಧವಾಗಿದೆ. ಕೆತ್ತನೆಯ ವಿನ್ಯಾಸದಲ್ಲಿ 7 ಮತ್ತು 11ನೆಯ ಗುಹೆಗಳ ಒಳಭಾಗದ ಅಲಂಕೃತ ಚೈತ್ರ ಕಮಾನುಗಳೂ ವೇದಿಕೆ ಬಾಗಿಲುಗಳೂ ಒಂದಕ್ಕೊಂದು ಹೋಲುತ್ತವೆ. ಆದ್ದರಿಂದ ಇವೆರಡನ್ನು ಒಂದೇ ಸಮಯದಲ್ಲಿ ಕೊರೆದಿರಬಹುದೆಂದು ಊಹಿಸಬಹುದಾಗಿದೆ. 7ನೆಯ ಗುಹೆಯಲ್ಲಿರುವ ಶಾಸನವೊಂದರಿಂದ ಈ ಗುಹೆಯ ನಿರ್ಮಾಣಕಾರ್ಯ ಕ್ರಿ.ಪೂ.1ನೆಯ ಶತಮಾನದಲ್ಲಿ ನಡೆದಿರಬಹುದೆಂದು ನಿರ್ಧರಿಸಬಹುದು. ಇದು ಅತ್ಯಂತ ದೊಡ್ಡದಾಗಿಯೂ ಸುಂದರವಾಗಿಯೂ ಇದೆ. ಸುಮಾರು ಒಂಬತ್ತು ಮೀಟರ್ ವಿಸ್ತಾರವಾದ ಬಂಡೆಯಲ್ಲಿ ಇದನ್ನು ಕೆತ್ತಲಾಗಿದೆ. 12ಮೀ ಉದ್ದ ಮತ್ತು 2.5 ಮೀ ಅಗಲವಿರುವ ಸ್ಥಳದಲ್ಲಿ ಮಾರ್ಗ ನಿರ್ಮಿಸಲಾಗಿದ್ದು ಇದು ತೆರೆದ ಹಜಾರದೊಳಕ್ಕೆ ಜನರಿಗೆ ಪ್ರವೇಶ ಒದಗಿಸಿದೆ. ಹಜಾರದ ಹಿಂಭಾಗದಲ್ಲಿ ಕುಂಭಾಕಾರದ ತಳ, ಅಷ್ಟಕೋನಾಕಾರದ ಕಾಂಡ, ತಲೆಕೆಳಗಾಗಿರುವ ಗಂಟೆಯಾಕಾರದ ಮೇಲ್ಭಾಗ ಮತ್ತು ಪ್ರಾಣಿಗಳ ಚಿತ್ರಗಳಿಂದ ಅಲಂಕೃತವಾದ ಮತ್ತೊಂದು ಹಜಾರ ಇದೆ. ಹಿಂಭಾಗದ ಎರಡು ಕೋನಗಳಲ್ಲಿಯೂ ಒಂದೊಂದು ಕೊಠಡಿ ಉಂಟು. ಇದರೊಳಗೆ ಕಲ್ಲಿನಲ್ಲಿ ಕೊರೆದಿರುವ ಕಲ್ಲುಮಂಚಗಳಿವೆ. ವರಾಂಡದ ಹಿಂಭಾಗದಲ್ಲಿರುವ ಹಜಾರಕ್ಕೆ ಎರಡು ಬಾಗಿಲುಗಳಿವೆ. ಹಜಾರದ ಎರಡು ಸಾಲುಗಳಲ್ಲಿ ಇಪ್ಪತ್ತನಾಲ್ಕು ಕಂಬಗಳಿದ್ದ ಅದನ್ನು ಮಧ್ಯಭಾಗ ಮತ್ತು ಎರಡು ಪಾಶ್ರ್ವಭಾಗಗಳಾಗಿ ವಿಂಗಡಿಸಿದೆ. ಬಾಗಿಲಿನಿಂದ ಸುಮಾರು 9.4 ಮೀ ಹಿಂದೆ ಮಧ್ಯಭಾಗದಲ್ಲಿ ಸ್ತೂಪ ಕೆತ್ತಲಾಗಿದೆ. ಇದರಲ್ಲಿ ಅಲಂಕೃತ ವೇದಿಕಾ, ಗೋಲಾಕಾರದ ಅಂಡÀ, ಮೇಲುಭಾಗದಲ್ಲಿ ಚಪ್ಪಟೆಯಾಗಿರುವ ಹರ್ಮಿಕಾ ಮತ್ತು ವೃತ್ತಾಕಾರದ ತೂತಿನಲ್ಲಿ ಮರದ ಸ್ತಂಭ (ಯಷ್ಟಿ) ಇವೆ. ವರಾಂಡದಲ್ಲಿರುವ ಸ್ತಂಭಗಳು ಮತ್ತು ಅರ್ಧಸ್ತಂಭಗಳು ಸುಂದರ ಅಲಂಕರಣಗಳಿಂದ ಕೂಡಿವೆ. ಇವುಗಳ ಮೇಲ್ಭಾಗದಲ್ಲಿ ಆನೆ, ಕುದುರೆ ಮುಂತಾದ ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ. 

	ಇಲ್ಲಿರುವ ಗುಹೆಗಳಲ್ಲೆಲ್ಲ ಹನ್ನೊಂದನೆಯ ಗುಹೆ ಬಹಳ ಮುಖ್ಯವಾದುದು. ವಾಸ್ತುವಿನ್ಯಾಸದ ದೃಷ್ಟಿಯಿಂದ ಇದರ ರಚನೆ ವಿಶಿಷ್ಟವಾದುದು. ಪಶ್ಚಿಮ ಕರಾವಳಿಯಲ್ಲಿ ಇಂಥ ಗುಹೆ ಇನ್ನೊಂದಿಲ್ಲ. ಇದರ ಮೂರು ಕಡೆಯ ಒಳಗೋಡೆಗಳಲ್ಲಿ ವಾಸಗೃಹಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಒಂಬತ್ತು ವಾಸದ ಕೊಠಡಿಗಳಿದ್ದು ಒಂದೊಂದರಲ್ಲಿಯೂ ಎರಡೆರಡು ಕಲ್ಲುಮಂಚಗಳಿವೆ. ಇಲ್ಲಿರುವ 3ನೆಯ ಗುಹೆಯ ನಿರ್ಮಾಣಕ್ಕೆ ಬಹುದೂರದ ನಾಸಿಕದ ವ್ಯಾಪಾರಿ ಧಾನ ಮಾಡಿರುವುದು ಕುತೂಹಲ ಸಂಗತಿ. ಒಬ್ಬ ಥೇರನ (ಗುರುವಿನ) ಜ್ಞಾಪಕಾರ್ಥವಾಗಿ ಅವನ ಶಿಷ್ಯರು ಈ ಚೈತ್ಯಗೃಹ ನಿರ್ಮಿಸಿದರೆಂದು ಇಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ. 3ನೆಯ ಮತ್ತು 11ನೆಯ ಗುಹೆಗಳು ವಾಸ್ತುಶಿಲ್ಪದಲ್ಲಿ ಕೆಲವು ಹೊಸ ವಿಧಾನಗಳ ಅಳವಡಿಕೆಗೆ ಹೆಸರುವಾಸಿಯಾಗಿವೆ. ಅದೆಂದರೆ, ಗಜಪೃಷ್ಠಾ ಕೃತಿಯ ಗುಹೆಯ ಹಜಾರದಲ್ಲಿಯೂ ಕಂಬಗಳಿಂದ ಅಲಂಕೃತವಾದ ವರಾಂಡವಿರುವುದು. ಈ ಗುಹೆಗಳ ನಿರ್ಮಾಣವಾದ ಮೇಲೆ ಇಲ್ಲಿರುವ ವಿಹಾರ ಸುಮಾರು ಮೂವತ್ತು ಜನ ಸನ್ಯಾಸಿಗಳಿಗೆ ಸ್ಥಳಾವಕಾಶ ಒದಗಿಸಿರಬಹುದೆಂದು ತಿಳಿದು ಬರುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಅವರಿಗೆ ನೀರಿನ ಸೌಲಭ್ಯ ಒದಗಿಸುವ ಸಲುವಾಗಿ ಹೊಂಡ ಅಥವಾ ಕೊಳಗಳನ್ನು ನಿರ್ಮಿಸಲಾಯಿತು. ಜೊತೆಗೆ ಅವರ ವಾಸಕ್ಕಾಗಿ ವಿಶ್ರಾಂತಿ ಗೃಹ (ಮಂಟಪ 15) ಮತ್ತು ಸ್ನಾನದ ಕೊಳವನ್ನು (ಗುಹೆ 14) ಸೇರಿಸಲಾಯಿತು. ಇಲ್ಲಿದ್ದ ಬೌದ್ಧ ಸಂಘ ಸುಮಾರು ಒಂದೂವರೆ ಶತಮಾನಗಳ ಕಾಲ ಜನಾನುರಾಗಿಯಾಗಿತ್ತು. ಅನಂತರ ಇದು ಕ್ಷೀಣಿಸುತ್ತ ಬಂದು ಕ್ರಿ.ಶ. 1ನೆಯ ಶತಮಾನದ ಅನಂತರ ಸಂಘ ಅಸ್ತಿತ್ವದಲ್ಲಿದ್ದರೂ ವಾಸ್ತುಶಿಲ್ಪದ ದೃಷ್ಟಿಯಿಂದ ಯಾವುದೇ ಬೆಳೆವಣಿಗೆಯನ್ನು ಸಾಧಿಸಲಿಲ್ಲ. 
(ಸಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ